ಶಿಲಾವರ್ಗಗಳು

	ಕರ್ನಾಟಕ ರಾಜ್ಯದ ಬಹುಭಾಗ ಅತ್ಯಂತ ಪ್ರಾಚೀನವಾದ ಶಿಲೆಗಳಿಂದ ಆವೃತವಾಗಿದೆ. ಇವುಗಳನ್ನು ಎರಡು ಮುಖ್ಯ ವಿಭಾಗಗಳಾಗಿ ವಿಂಗಡಿಸಿದ್ದಾರೆ. 1. ಬೆಳ್ಳಿ, ಬಂಗಾರ, ತಾಮ್ರ, ಕಬ್ಬಿಣದ ಸಂಬಂಧದ ಲೋಹಗಳನ್ನೊಳಗೊಂಡಿರುವ ಧಾರವಾಡ ಶಿಲಾಸ್ತೋಮ 2. ಗ್ರಾನೈಟ್ ಸಂಬಂಧದ ನೈಸ್ ಶಿಲಾಸ್ತೋಮ.

	ದಕ್ಷಿಣ ಕರ್ನಾಟಕದಲ್ಲಿನ ಶಿಲೆಗಳು ಭೂಮಿಯ ಹುಟ್ಟಿನ ಆದಿಕಾಲ ದಲ್ಲಿ ರೂಪುಗೊಂಡ ಅತಿ ಪ್ರಾಚೀನ ವರ್ಗಕ್ಕೆ ಸೇರಿದುವೆಂದು ಪ್ರಸಿದ್ಧಿಯಾಗಿವೆ. ಇವುಗಳು ರೂಪುಗೊಂಡ ಕಾಲ ಮೂರು ಸಾವಿರ ಮಿಲಿಯ (ಮುನ್ನೂರು ಕೋಟಿ) ವರ್ಷಗಳಿಗೂ ಹಳೆಯದು. ಈ ಬಗೆಯ ಶಿಲೆಗಳನ್ನು ಸರಗೂರು, ಕೋಲಾರ, ನುಗ್ಗೇಹಳ್ಳಿ, ಹಟ್ಟಿ ಬಳಿ ಗುರುತಿಸಿದ್ದಾರೆ.

	ಈ ಪುರಾತನ ಕಾಲದ ಅಗ್ನಿ ಮತ್ತು ರೂಪಾಂತರ ಶಿಲೆಗಳನ್ನು ಛೇದಿಸಿ, ತುಂಡರಿಸಿ, ಅವುಗಳನ್ನು ಬಹುಶಃ ಜೀರ್ಣಿಸಿಕೊಂಡು ಬಹುವ್ಯಾಪಿ ಯಾಗಿರುವ ನೈಸ್ ಶಿಲೆಗಳು ರಾಜ್ಯದ ಬಹುಭಾಗವನ್ನು ಆವರಿಸಿವೆ. ಈ ವರ್ಗದ ಕಲ್ಲುಗಳನ್ನು ಬೆಂಗಳೂರು ಸುತ್ತ ನೋಡಬಹುದು. ನೈಸ್‍ಗಳಿಂದ ಆವೃತವಾದ ಬಯಲು ಸೀಮೆಯಲ್ಲಿ ಅಲ್ಲಲ್ಲಿ ಬೋರಲಿಟ್ಟ ಬಟ್ಟಲುಗಳಂತೆ ಕಲ್ಲುಗುಂಡುಗಳಿಂದ ನಿಬಿಡವಾಗಿ ಎದ್ದುನಿಂತ ಗುಡ್ಡಸಾಲುಗಳನ್ನು ನೋಡಬಹುದು. ಶಿವಗಂಗೆ, ಸಾವನದುರ್ಗ, ದೇವರಾಯನದುರ್ಗ, ಮಧುಗಿರಿ ಮತ್ತು ಕೊರಟಗೆರೆ ಸುತ್ತಲಿನ ಬೆಟ್ಟಗಳು, ಹಂಪೆಯ ಸುತ್ತಲಿನ ಬೆಟ್ಟಸಾಲುಗಳು ಈ ಬಗೆಯ ಗ್ರಾನೈಟ್‍ಗಳಿಂದ ನಿರ್ಮಿತವಾದವು. ಕರ್ನಾಟಕದಲ್ಲಿ ಎಲ್ಲಿ ಹೋದರಲ್ಲಿ ಎದ್ದು ನಿಂತ ಬಗೆಬಗೆಯ ಆಕಾರವನ್ನು ತೋರುವ ಗುಡ್ಡಸಾಲುಗಳು ತಮ್ಮದೇ ಆದ ಒಂದು ನಿಸರ್ಗ ರಮಣೀಯತೆಯನ್ನು ಪಡೆದುಕೊಂಡಿವೆ.

	ಈ ನೈಸುಗಳ ಮೇಲೆ ಒರಗಿದಂತೆ ಸಾವಿರಾರು ಅಡಿ ಮಂದದ ಪದರು ಶಿಲೆಗಳು, ದಕ್ಷಿಣದಲ್ಲಿ ಶ್ರೀರಂಗಪಟ್ಟಣದಿಂದ ಹಿಡಿದು ಉತ್ತರದಲ್ಲಿ ಬೆಳಗಾಂವಿಯವರೆಗೂ ಹಬ್ಬಿವೆ. ಧಾರವಾಡದ ಬಳಿ ವಿಸ್ತಾರವಾಗಿ ಹರಡಿರುವುದರಿಂದ ಈ ಶಿಲಾವರ್ಗವನ್ನು ಧಾರವಾಡ ಶಿಲಾವರ್ಗ ಎಂದು ಗುರುತಿಸಿದ್ದಾರೆ. ರಾಜ್ಯದಲ್ಲಿ ದೊರೆಯುವ ಖನಿಜ ಸಂಪತ್ತಿಗೆಲ್ಲ ಈ ಧಾರವಾಡ ಪದರುಶಿಲಾ ಸಮುದಾಯವೇ ಆಕರವಾಗಿದೆ. ಪಶ್ಚಿಮ ಘಟ್ಟದ ಸಹ್ಯಾದ್ರಿ ಪರ್ವತ, ಬಾಬಾಬುಡನ್ ಪರ್ವತ ಶ್ರೇಣಿ, ಕೊಡಚಾದ್ರಿ, ಚಿಕ್ಕನಾಯಕನಹಳ್ಳಿ, ಚಿತ್ರದುರ್ಗ, ಗದಗ, ರಾಯಚೂರು, ಹಟ್ಟಿ ಈ ಸುತ್ತಲಿನ ಶಿಲೆಗಳೆಲ್ಲವೂ ಧಾರವಾಡ ಶಿಲಾವರ್ಗಕ್ಕೆ ಸೇರಿದುವು. ಈ ವರ್ಗದ ಶಿಲೆಗಳಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಅದುರುಗಳು, ತಾಮ್ರ, ಸೀಸ, ಚಿನ್ನ, ಬೆಳ್ಳಿ ಮುಂತಾದ ಲೋಹಗಳ ಅದುರುಗಳು ದೊರೆಯುತ್ತವೆ.

	ಮೈಸೂರು ಜಿಲ್ಲೆಯ ದಕ್ಷಿಣ ಭಾಗದಲ್ಲಿ ಬಿಳಿಗಿರಿರಂಗನ ಬೆಟ್ಟ, ಗೋಪಾಲಸ್ವಾಮಿ ಬೆಟ್ಟ, ನೀಲಗಿರಿ ಬೆಟ್ಟ ಸಾಲುಗಳಲ್ಲಿ ಬೂದು ಬಣ್ಣದ ಒಂದು ವಿಶೇಷ ರೀತಿಯ ಗ್ರಾನೈಟ್ ಶಿಲೆಗಳು ದೊರೆಯುತ್ತವೆ. ಇವುಗಳನ್ನು ಚಾರ್ನೊಕೈಟ್ ಎಂದು ಗುರುತಿಸಿದ್ದಾರೆ.

	ದಕ್ಷಿಣದಲ್ಲಿ ಶಿವಸಮುದ್ರದಿಂದ ಹಿಡಿದು ಉತ್ತರದಲ್ಲಿ ತುಂಗಭದ್ರೆಯ ದಕ್ಷಿಣ ದಂಡೆಯವರೆಗೆ ಒಂದೇ ಸಮನೆ ಹಬ್ಬಿರುವ ಕಲ್ಲುಗುಂಡುಗಳಿಂದ ನಿಬಿಡವಾದ ಗುಡ್ಡ ಸಾಲು ಕಾಣಿಸುತ್ತದೆ. ಸಾವನದುರ್ಗ, ಕಬ್ಬಾಳದುರ್ಗ, ಶಿವಗಂಗೆ, ಮಧುಗಿರಿ, ಕೊರಟಗೆರೆ ಬೆಟ್ಟಗಳು, ಮಿಡಿಗೇಶಿ, ಪಾವಗಡ, ಮೊಳಕಾಲ್ಮೂರು, ಹಂಪೆ ಈ ಸುತ್ತಲಿನ ಬೆಟ್ಟಗಳೆಲ್ಲವೂ ಒರಟುಒರಟಾದ, ಅಗಲ ಹರಳುಗಳುಳ್ಳ ಕೆಂಪು ಬಣ್ಣದ ಗ್ರಾನೈಟ್‍ಗಳಿಂದ ರೂಪಿತವಾದುವು. ಇವುಗಳನ್ನು ಕ್ಲೋಸ್‍ಪೇಟೆ ಗ್ರಾನೈಟ್ ಎಂಬ ಹೆಸರಿನಿಂದ ಕರೆಯುತ್ತಾರೆ. ಕ್ಲೋಸ್‍ಪೇಟೆ (ಈಗಿನ ರಾಮನಗರ) ಸುತ್ತಲಿನ ಬೃಹದಾಕಾರದ ಬಂಡೆಗಳಿಂದ ಕೂಡಿರುವ ಬೆಟ್ಟಗಳೆಲ್ಲವೂ ಈ ಗ್ರಾನೈಟ್‍ನಿಂದ ರೂಪಿತವಾದುವು.

	ಕರ್ನಾಟಕದಲ್ಲಿ ಕಾಣುವ ಮುಖ್ಯ ಶಿಲಾವರ್ಗಗಳನ್ನೂ ಅವುಗಳ ಸ್ಥೂಲ ವಿವರಣೆಯನ್ನೂ ಮುಂದಿನ ಪಟ್ಟಿಯಲ್ಲಿ ಕಾಣಿಸಿದೆ.

ಮೇಲೆ ವಿವರಿಸಿದ ಶಿಲೆಗಳೆಲ್ಲವೂ ಅತಿ ಪ್ರಾಚೀನವಾದುವು. ಅವು ತಮ್ಮ ಮೊದಲ ರೂಪವನ್ನು ಬದಲಾಯಿಸಿ ರೂಪಾಂತರ ಹೊಂದಿರು ತ್ತವೆ. ಇಂಥ ಶಿಲೆಗಳ ಮೇಲೆ ಹಾಸಿದಂತೆ ಈಚಿನ ಇನ್ನೊಂದು ಶಿಲಾವರ್ಗ ಬೆಳಗಾಂವಿಯ ಪೂರ್ವಭಾಗದಿಂದ ಹಿಡಿದು ಬಾಗಲಕೋಟೆ ಯವರೆಗೆ ಹರಡಿರುವುದು ಕಾಣುತ್ತದೆ. ಈ ವರ್ಗದ ಕಲ್ಲುಗಳಲ್ಲಿ ಸುಣ್ಣಕಲ್ಲಿನ ಶಿಲೆಗಳೇ ಪ್ರಮುಖವಾದವು. ಕಲಾದಗಿಯ ಬಳಿ ಇವು ಬಹುವಾಗಿ ಹರಡಿರುವುದರಿಂದ ಈ ವರ್ಗದ ಶಿಲೆಗಳಿಗೆ ಕಲಾದಗಿ ಶಿಲಾವರ್ಗ ಎಂದು ಹೆಸರಿಸಿದ್ದಾರೆ. ಘಟಪ್ರಭಾ ಮತ್ತು ಕೃಷ್ಣಾ ನದಿಗಳು ಬೆಳಗಾಂವಿ ಬಿಜಾಪುರ ಜಿಲ್ಲೆಗಳಲ್ಲಿ ಈ ಶಿಲೆಗಳನ್ನು ಹಾದುಹೋಗಿರು ತ್ತವೆ. ಬಾದಾಮಿ, ಪಟ್ಟದಕಲ್ಲಿನ ದೇವಸ್ಥಾನಗಳು ಈ ಕಲಾದಗಿ ಶಿಲೆಗಳಿಂದ ಕಡೆದವು.

ಇವಕ್ಕೂ ಸ್ವಲ್ಪ ಈಚಿನ ಶಿಲೆಗಳು ಮುಖ್ಯವಾಗಿ ಗುಲ್ಬರ್ಗ ಜಿಲ್ಲೆಯ ಭೀಮಾನದಿಯ ಇಕ್ಕೆಲದಲ್ಲಿ ಕಾಣುತ್ತವೆ. ಇವೂ ಬಹುವಾಗಿ ಸುಣ್ಣಕಲ್ಲಿ ನಿಂದ ಕೂಡಿದವು. ಇವುಗಳಿಗೆ ಭೀಮಾ ಶಿಲಾಸ್ತೋಮ ಎಂದು ಹೆಸರು. ಇವು ಮುಖ್ಯವಾಗಿ ಮುದ್ದೇಬಿಹಾಳ, ತಾಳಿಕೋಟೆ, ಶಾಹಬಾದ, ವಾಡಿ, ಚಿತ್ತಾಪುರ, ಸೇಡಂ, ಚಿಂಚೋಳಿ ಈ ಸ್ಥಳಗಳಲ್ಲಿ ಕಾಣುತ್ತವೆ. ಇಲ್ಲಿಯ ಸುಣ್ಣಕಲ್ಲನ್ನು ಉಪಯೋಗಿಸಿ ಮೂರು ದೊಡ್ಡಪ್ರಮಾಣದ ಸಿಮೆಂಟ್ ತಯಾರಿಕಾ ಕಾರ್ಖಾನೆಗಳು ಗುಲ್ಬರ್ಗ ಜಿಲ್ಲೆಯಲ್ಲಿದ್ದು ಹೇರಳವಾಗಿ ಸಿಮೆಂಟನ್ನು ತಯಾರಿಸುತ್ತವೆ.

	ಮೇಲೆ ವಿವರಿಸಿದ ಎಲ್ಲ ಶಿಲೆಗಳೂ ಅತಿ ಪ್ರಾಚೀನ ಕಾಲಕ್ಕೆ ಸೇರಿದ, ಜೀವ ಚಿಹ್ನೆ ಅಷ್ಟಾಗಿ ಕಾಣದ ಶಿಲಾವರ್ಗಗಳಿಗೆ ಸೇರಿದುವು. ಈ ಎಲ್ಲ ವರ್ಗದ ಶಿಲೆಗಳ ಮೇಲೂ ಸು. 5 ಕೋಟಿ ವರ್ಷಗಳ ಹಿಂದೆ ಅಗಾಧ ಪ್ರಮಾಣದಲ್ಲಿ ಶಿಲಾ ಲಾವ ಪ್ರವಾಹ ರೂಪದಲ್ಲಿ ಹರಿದು ಮಂದವಾದ ಹೊದಿಕೆಯಂತೆ ಕುಳಿತಿದೆ. ಬೆಳಗಾಂವಿ ಜಿಲ್ಲೆಯ ಉತ್ತರಭಾಗ, ಬಿಜಾಪುರ, ಗುಲ್ಬರ್ಗ ಮತ್ತು ಬಿದರೆ ಜಿಲ್ಲೆಗಳು ದಖನ್‍ಲಾವಾ ಪ್ರವಾಹದಿಂದ ಮುಚ್ಚಿಹೋಗಿವೆ. ಇವು ಮಟ್ಟವಾಗಿದ್ದು ಬಹುದೂರ ಹರಡಿರುತ್ತವೆ. ಇಲ್ಲಿಯ ಬೆಟ್ಟಗಳು ಮೇಜಿನಾಕಾರದಲ್ಲಿವೆ. ಅವುಗಳಲ್ಲಿ ಶಿಖರಗಳಿರುವುದಿಲ್ಲ. ಈ ಬಗೆಯ ಶಿಲೆಗಳನ್ನು ದಖನ್‍ಲಾವಾಗಳೆಂದು ಗುರುತಿಸುತ್ತಾರೆ. ಇವು ಬೀಳುಬಿದ್ದಾಗ ಅದರಿಂ ದುಂಟಾದ ಮಣ್ಣು ಕಪ್ಪುಛಾಯೆಯನ್ನು ಹೊಂದಿರುತ್ತದೆ. ಈ ಎರೆಮಣ್ಣಿನ ಪ್ರದೇಶ ಫಲವತ್ತಾದುದು. ನೂರಾರು ಮೈಲುಗಳು, ಎತ್ತ ನೋಡಿದರೂ ಅತ್ತ, ಯಾವ ಒಂದು ಏರು ತಗ್ಗೂ ಇಲ್ಲದೆ ಕಪ್ಪುಮಣ್ಣಿನಿಂದ ಆವೃತವಾದ ಅಗಾಧ ಬಯಲು ಕಾಣುತ್ತದೆ. ದಖನ್‍ಲಾವಾಗಳಿಂದ ಆವೃತವಾದ ಪ್ರದೇಶ ಈ ಬಗೆಯ ಬಯಲು ಭೂಮಿಗೆ ಉತ್ತಮ ನಿದರ್ಶನ.

ಬೆಳಗಾಂವಿ ಜಿಲ್ಲೆಯ ಪಶ್ಚಿಮಕ್ಕೆ ಮತ್ತು ಬೀದರ್ ಜಿಲ್ಲೆಯ ಬೀದರ್, ಹುಮನಾಬಾದ ಮತ್ತು ಬಸವಕಲ್ಯಾಣ ತಾಲ್ಲೂಕುಗಳಲ್ಲಿ ಬಹು ವ್ಯಾಪಿಯಾಗಿ ರಂಧ್ರಮಯವಾಗಿರುವ ಕೆಮ್ಮಣ್ಣು ಬಣ್ಣದ, ಮಣ್ಣುರೂಪಿನ ಆದರೂ ಬಹು ಗಡುಸಾದ ಒಂದು ಬಗೆಯ ಶಿಲೆ ದೊರೆಯುತ್ತದೆ. ಇದೇ ಬಗೆಯ ಶಿಲೆ ಪಶ್ಚಿಮ ಕರಾವಳಿಯ ಉದ್ದಕ್ಕೂ ಕಾಣುವುದುಂಟು. ಇದನ್ನು ಲ್ಯಾಟರೈಟ್ ಎಂದು ಕರೆಯುತ್ತಾರೆ. ಇದನ್ನು ಜಂಬಿಟ್ಟಿಗೆ, ಇಟ್ಟಿಗೆ ಕಲ್ಲು ಎಂದೂ ಕರೆಯುತ್ತಾರೆ. ಕರಾವಳಿಯ ಕಟ್ಟಡಗಳೆಲ್ಲವೂ ಈ ಕಲ್ಲಿನಿಂದ ಕಟ್ಟಿದುವು. ಬೀದರ್, ಬೆಳಗಾಂವಿ ಸುತ್ತಲೂ ಈ ಕಲ್ಲಿನಿಂದ ಕಟ್ಟಿದ ಮನೆಗಳನ್ನು ಗುರುತಿಸಬಹುದು. ಈ ಬಗೆಯ ಶಿಲೆಗಳಲ್ಲಿರುವ ಅಲ್ಯೂಮಿನಿಯಂ ಅಂಶ ಹೆಚ್ಚಾದಾಗ ಅವು ಬಾಕ್ಸೈಟ್ ಅದುರಾಗಿ ಮಾರ್ಪಡುತ್ತವೆ. ಅವುಗಳಿಂದ ಅಲ್ಯೂಮಿನಿಯಂ ಲೋಹ ವನ್ನು ಪಡೆಯಬಹುದು. ದಖನ್‍ಲಾವಾಗಳನ್ನು ಮತ್ತು ಅದರ ಮೇಲೆ ರೂಪುಹೊಂದಿದ ಜಂಬಿಟ್ಟಿಗೆಯನ್ನು ಬಿಟ್ಟರೆ ಇನ್ನುಳಿದಿರುವುದು ಕಡಲ ಅಂಚಿನಲ್ಲಿ ಶೇಖರವಾಗಿರುವ ಈಚಿನ ಮರಳು ಶಿಲೆಗಳು, ಮೆಕ್ಕಲು ಮಣ್ಣು.			
			
(ಬಿ.ಪಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ